ಅತಿಥಿ ಬಂದರು

ಆರ್.ಪಿ.ಜಗದೀಶ್ ಅವರಿಗೆ ಉಪಪ್ರಾಂಶುಪಾಲ ಪ್ರಶಾಂತ್ ರಿಂದ ನೆನಪಿನ ಹೊತ್ತಿಗೆ
ಸಂಜೆ 4 ಆಗಿತ್ತು. ಬೆಲ್ ರಿಂಗಣಿಸಿತು. ಶಾಲೆ ಮುಗಿಯಿತು. ಮಕ್ಕಳೆಲ್ಲಾ ಹೊರಟರು. ಕಚೇರಿ ಕೆಲಸವಿತ್ತು. ಹಾಗಾಗಿ ಎಚ್.ಎ.ಎಂ.,ಪಿಎಂ ಮೊದಲಾದವರ ಜೊತೆಗೆ ವಿಪಿ ನನ್ನ ಅಂಗಳದಲ್ಲಿದ್ದರು. ಕೆಲಸ ಮುಗಿಸಿ ಹೊರಟುಬಿಟ್ಟರು. ತಂಗಿ ಕರೆದುಕೊಂಡು ಹೋಗುವ ಉದ್ದೇಶದಿಂದ ಆಗಲೇ ಕೊತ್ತವಳ್ಳಿ ಕೊಪ್ಪಲು ಬಿಟ್ಟು ಹೋಗ್ತಿದ್ದರು. ಆಗಲೇ, ಫೋನ್ ರಿಂಗಣಿಸಿತು. ರಾವಂದೂರು ಗ್ರಾಮದ ಮುಖಂಡರಾದ ಆರ್.ಟಿ.ಸತೀಶ್, ನನ್ನ ಹಳೇ ವಿದ್ಯಾರ್ಥಿ ಕಾಲ್ ಮಾಡಿದರು. ಆರ್.ಪಿ.ಜಗದೀಶ್ ಬರ್ತಿದ್ದಾರೆ ಅಂದರು. ಈ ಮೊದಲೇ ಅವರು ನನ್ನ ವಿದ್ಯಾರ್ಥಿ ಎಂಬ ಅರಿವಿದ್ದ ಉಪ್ರಾ ಅವರ ಸ್ವಾಗತಕ್ಕೆ ಸಿದ್ಧವಾದರು. ಶಾಲೆಯಿಂದ ಹೊರಟಿದ್ದ  ಸರ್ ಗಳನ್ನು ಮತ್ತೆ ಬರಲು ಹೇಳಿ ಹಿಂತಿರುಗುತ್ತಿದ್ದರು. ಅಂತೂ 5:30ಕ್ಕೆ ಸರಿಯಾಗಿ ಅಂದಿನ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾಗಿದ್ದ ಆರ್.ಪಿ.ಜಗದೀಶ್  ಶಾಲೆಗೆ ಬಂದರು. ಬರು ಬರುತ್ತಿದ್ದಂತೆಯೇ ನೆನಪಿನಂಗಳಕ್ಕೆ ಜಾರಿದರು. ತಾವು ಕೂರುತ್ತಿದ್ದ 8ನೇತರಗತಿ ಬಿ ಸೆಕ್ಷನ್, ಆಗ ಇದ್ದ ಮೇಷ್ಟ್ರುಗಳು, ಅವರು ಮಾಡುತ್ತಿದ್ದ ಪಾಠದ ಪರಿ, ಕ್ರಿಕೆಟ್ ಆಟದ ವೈಖರಿ......ಎಲ್ಲವೂ ಅವರ ನೆನಪಿನಂಗಳದಿಂದ ಎದ್ದು ಬಂದವು. ಜೊತೆಗೆ ಸಚಿವರಾಗಿದ್ದ ಜಗದೀಶ್ ಶೆಟ್ಟರ್ ಅವರ ಆಪ್ತ ಕಾರ್ಯದರ್ಶಿ ಪ್ರಕಾಶ್ ಅವರೂ ಇದ್ದರು. ವಿಪಿ ಪ್ರಶಾಂತ್  ತುಂಬ ಭಾವುಕರಾಗಿ ಅವರ ಜೊತೆ ಸಂಭಾಷಣೆ ಮಾಡಿದರು. ಹಿಂದಿದ್ದ ಮಾಧ್ಯಮ ಕ್ಷೇತ್ರದ ಕೆಲವು ನೆನಪುಗಳನ್ನು ಬಿಚ್ಚಿಟ್ಟರು. ಜೊತೆಗೆ ಈಗಿನ ಶಾಲೆಯ ಅಭಿವೃದ್ಧಿಗೆ ಸಹಕರಿಸುವಂತೆ ಕೋರಿದರು. ಕೋರಿಕೆಗೆ ಕಿವಿಗೊಟ್ಟ ಆರ್.ಪಿ.ಜೆ. ಖಂಡಿತ ಪ್ಲಾನ್ ಮಾಡಿ ಕಳುಹಿಸುವುದಾಗಿ ತಿಳಿಸಿದರು. ನಬಾರ್ಡ್ ನೆರವಿನಿಂದ ಕಟ್ಟಡ ಕಟ್ಟಿಸುವ ಭರವಸೆ ಇಟ್ಟರು. ಇದೇ ಖುಷಿಯಲ್ಲಿ ನೆನಪಿನ ಕಾಣಿಕೆಯಾಗಿ ಬೆಳಗೆರೆ ಕೃಷ್ಣಶಾಸ್ತ್ರಿಗಳ ``ಯೋಗ್ದಾಗೆಲ್ಲಾ ಐತೆ'' ಪುಸ್ತಕವನ್ನು ನೀಡಿದರು. ಹೊಳೆಯುತ್ತಿದ್ದ ಗೂಟದ  ಕಾರು ಹಾಗೆ ಮಣ್ಣಲ್ಲಿ ಅಚ್ಚೊತ್ತಿದ ಗೆರೆ ಮೂಡಿಸಿ ಹೊರಟಿತು. ಮಾರನೆ ದಿನದ ಪತ್ರಿಕೆಗಳಲ್ಲಿ ಹೀಗೆ ಬಂದು ಹಾಗೆ ಹೋದ ಸುದ್ದಿ ಪ್ರಕಟವಾಯಿತು. ಭರವಸೆಯ ಬೆಳಕು ಅಂದು ಮೂಡಿದ್ದು,,,,ಇಂದು ಹಾಗೇ ಇದೆ. ಅದು ಎಂದು ನನ್ನ ಅಂಗಳ ತಲುಪುವುದೋ ನೋಡೋಣ........

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು