ಕನ್ನಡ ಚರ್ಚಾಕೂಟ-2011



ಅದು ನಾಕು ದಶಕಗಳ ಇತಿಹಾಸ. 30/12/11 ರಂದು ಮತ್ತೆ ಮರುಕಳಿಸಿತು. ನಮ್ ಶಾಲೆಯಲ್ಲಿ ಮತ್ತೆ ಕನ್ನಡ ಚರ್ಚಾಸ್ಪರ್ಧೆ - 2011 ನಡೆಯಿತು. ಕಳೆದ ವರ್ಷದಂತೆ ಸ್ಪರ್ಧೆ ಆಯೋಜಿಸಿದ್ದು ಹಳೇ ವಿದ್ಯಾರ್ಥಿಗಳ ಸಂಘ. ಸಂಘದ ಸಂಸ್ಥಾಪಕ ಅಧ್ಯಕ್ಷ ರಂಗಸ್ವಾಮಿ ಮತ್ತು ಕಾರ್ಯದರ್ಶಿ ಚಿಕ್ಕವೀರಶೆಟ್ಟರ ಸತತ ಪ್ರಯತ್ನ ಮತ್ತದಕೆ ಶಾಲೆ ಸಹಕಾರ ಈ ಸ್ಪರ್ಧೆಗೆ ಕಾರಣ.
ಕಿಡಿ ಹೊತ್ತಿತು

ಈ ಹಿಂದೆ ವಿದ್ಯಾರ್ಥಿಯಾಗಿದ್ದು ಈಗ ನಿವೃತ್ತಿ ಜೀವನದಲ್ಲಿರುವ ರಂಗಸ್ವಾಮಿ ಅವರದ್ದು 70ರ ಹರೆಯ. ಆದರೆ, `ಅವರ ಯುವ ಮನಸು ಇಂದಿಗೂ ಶಾಲೆ ಎಂದರೆ ತೆರೆದುಕೊಳ್ಳುತ್ತದೆ. ಕಲಿಯುವಂತೆ ಮನಸು ಹೇಳುತ್ತ್ದೆ. ಆಟಾಡುವಂತೆ ಕಾಲ್ಗಳು ಕುಣಿಯುತ್ತವೆ. ಓದುವಂತೆ ಹೃದಯ ಮಿಡಿಯುತ್ತೆ. ಇಷ್ಟು ದಿನದ ಗಾಢ ಅನುಭವ ಮಾತನಾಡುತ್ತಲೇ ಇರುತ್ತದೆ. ಅದಕ್ಕೆ ಅಂತ್ಯವೇ ಇಲ್ಲ.' ವೇದಿಕೆಯಲ್ಲಿ ಮೈಕ್ ಕೈಗೆ ಬಂದರೆ ಅದು ಅನುಭವಸಾರ ಸಾಗರದಂತೆ ಭೋರ್ಗರೆಯುತ್ತೆ. ಆದರೆ ಈ ವರ್ಷ ಕಳೆದ ವರ್ಷಕ್ಕಿಂತ ಕಡಿಮೆ ಮಾತನಾಡಿದ್ದು ಅವರ ಬಗ್ಗೆ ವಿದ್ಯಾರ್ಥಿಗಳಲ್ಲಿ ಗೌರವ ಮೂಡಿಸಿತು. " ಗಾಂಧೀಜಿಯವರ ಅಹಿಂಸಾ ಸತ್ವ  ಸತ್ಯ ಎಂದೆಂದೂ ನಮ್ಮ ಕೈ ಹಿಡಿದು ನಡೆಸುತ್ತೆ " ಅನ್ನೋದು ಅವರ ಅಚಲ ನಂಬಿಕೆ. ಅದಕ್ಕೆ ಮತ್ತೆ ಮುನ್ನುಡಿ ಹಾಡಿದ್ದು ಅವರ ಭಾಷಣ.

ವಿಷಯ ಹೀಗಿತ್ತು.
ಕಾಲೇಜು ವಿಭಾಗಕ್ಕೆ : " ನಮ್ಮ ದೇಶದ ಅಭಿವೃದ್ಧಿಗೆ ಅನ್ನದಾತರಿಗಿಂತ ಸೈನಿಕರ ಪಾತ್ರ ಹೆಚ್ಚು ಮುಖ್ಯ ?"
ಪ್ರೌಢಶಾಲಾ ವಿಭಾಗಕ್ಕೆ : " ದೇಶದ ಅಭಿವೃದ್ಧಿಗೆ ದಕ್ಷ ನಾಯಕರ ಪಾತ್ರವೇ ಮುಖ್ಯ "
ವಿಷಯದಲ್ಲೆ ಗೊಂದಲವಿತ್ತು. ಅದರ ಅರಿವೂ ನಮಗಿತ್ತು. ಆದರೂ ಸಂಘದ ಸಂಸ್ಥಾಪಕರ ಒಲ್ಲದ ಮನಸ್ಸು ಒಪ್ಪದ ಕಾರಣ ವಿಷಯ ಬದಲಾಗಲಿಲ್ಲ. ವಿದ್ಯಾರ್ಥಿಗಳೂ ಗೊಂದಲದಲ್ಲೇ ಚರ್ಚೆ ಮಾಡಿದರು. ಕಾಲೇಜಿನ ವಿಭಾಗದಲ್ಲಿ ಒಂದಷ್ಟು ಒಳ್ಳೆಯ ವಿಷಯಗಳು ತೇಲಿ ಬಂದವು.

ನಮ್ ಊರಿನ ಮುರುಘರಾಜೇಂದ್ರ ಮಠದ ಶ್ರೀಗಳು ಚರ್ಚೆಗೆ ಕಿಡಿ ಹೊತ್ತಿಸಿದರು. ಅಣ್ಣ ಬಸವಣ್ಣನ ನೆನೆದು " ಸ್ಪರ್ಧೆಯಲ್ಲಿ ಗೆಲುವ ಛಲದಿಂದಲೇ ಚರ್ಚೆ ಮಾಡುವಂತೆ " ಪ್ರೇರೇಪಿಸಿದರು. ಇನ್ನು ಸ್ಪರ್ಧೆ ಆರಂಭದ ಕಾರ್ಯಕ್ರಮದಲ್ಲಿ ಕಾಲೇಜಿನ ಹಿರಿಯ ಉಪನ್ಯಾಸಕ ಜಗನ್ನಾಥರಾವ್ ಜೋಷಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಹಂಡಿತವಳ್ಳಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಶಶಿಕಲಾರವರಿದ್ದರು. ಚರ್ಚೆಯ ನಿಷ್ಕರ್ಷೆಗೆ ಬಂದಿದ್ದ ವಕೀಲರಾದ ವಿಜಯ್ ಕುಮಾರ್, ಮಹೇಶ್, ಭಾಸ್ಕರ್ ರವರಿದ್ದರು.
ತೀರ್ಪುಗಾರರಾದ ವಕೀಲ ವಿಜಯ್ ಕುಮಾರ್ ಮಾತನಾಡುತ್ತಿರುವುದು

ಕಾಲೇಜಿನ ವಿಭಾಗದ ಪರ್ಯಾಯ ಪಾರಿತೋಷಕ ರಾವಂದೂರು ಜಿಜೆಸಿಗೆ, ಪರ್ಯಾಯ ಫಲಕ ಹುಣಸೂರಿನ ಜಿಜೆಸಿಗೆ, ಪ್ರಥಮ ಮತ್ತು ದ್ವಿತೀಯ  ಹುಣಸೂರಿನ  ಸ.ಪ.ಪೂ.ಕಾಲೇಜು ಪಡೆದುಕೊಂಡವು. ಪ್ರೌಢಶಾಲೆ ವಿಭಾಗದಲ್ಲಿ ಪರ್ಯಾಯ ಪಾರಿತೋಷಕ ಹಂಡಿತವಳ್ಳಿ ವಿದ್ಯಾರ್ಥಿಗಳಿಗೆ ಮತ್ತು ಪರ್ಯಾಯ ಫಲಕ ರಾವಂದೂರಿಗೆ ಮತ್ತು ಪ್ರಥಮ ಬಹುಮಾನ ಕಿತ್ತೂರಿಗೆ, ದ್ವಿತೀಯ ಬಹುಮಾನ ದೊಡ್ಡಬ್ಯಾಲಾಳಿಗೆ, ತೃತೀಯ ಬಹುಮಾನ ಹಂಡಿತವಳ್ಳಿಯ ಹಿರಿಮೆ ಹೆಚ್ಚಿಸಿದವು.


ಕಿತ್ತೂರಿನ ವಿದ್ಯಾರ್ಥಿಗಳೊಂದಿಗೆ ಶಿಕ್ಷಕರಾದ ಸೋಮಣ್ಣ


ಹುಣಸೂರಿನ ವಿದ್ಯಾರ್ಥಿನಿಯರು ಬಹುಮಾನ ಪಡೆಯುತ್ತಿರುವುದು

ಸಮಾರೋಪ ಭಾಷಣ ಮಾಡಿದ ಮುಖ್ಯೋಪಾಧ್ಯಾಯಿನಿ ಶಶಿಕಲಾರವರು, " ವಿಷಯ ಆಳ ಅಧ್ಯಯನ ಮುಖ್ಯ. ಅದರಿಂದ ನಿಮ್ಮ ಧೈರ್ಯ ಹೆಚ್ಚುತ್ತೆ . ನಿಮ್ಮ ಮಾತಿನಲ್ಲಿ, ಹಾವಭಾವದಲ್ಲಿ, ಪದ ಪ್ರಯೋಗದಲ್ಲಿ ಆತ್ಮವಿಶ್ವಾಸ ವಿರಲಿ " ಎಂದರು. 

ಕಡೆಗೆ ಅಧ್ಯಕ್ಷೀಯ ಭಾಷಣ ಮಾಡಿದ ನಮ್ ಶಾಲೆಯ ಉಪಪ್ರಾಂಶುಪಾಲ ಪ್ರಶಾಂತ್ ಎಂ.ಸಿ ಮಾತನಾಡಿ " ಚರ್ಚಾಸ್ಪರ್ಧೆ ಚರ್ಚೆಗೆ ನಾಂದಿ ಹಾಡಬೇಕು. ಚರ್ಚೆ ಸ್ನೇಹ ಬೆಳೆಸುತ್ತೆ. ಆದರೆ ವಾದಗಳೇ ಹೆಚ್ಚುತ್ತಿದೆ. ಇದು ವಾದ-ವಿವಾದಕ್ಕೆ ಕಾರಣವಾಗಿ, ಕಡೆಗೆ ವಾದ ಸಂಬಂಧಗಳಿಗೆ ಸಂಕೊಲೆ ಆಗುತ್ತೆ ಎಂದರು. ಮಾಹಿತಿಯ ಮಹಾಪೂರವೇ ಹರಿದುಬರುತ್ತಿರುವ ಈ ದಿನಗಳಲ್ಲಿ ಎಲ್ಲ ಮಾಹಿತಿಗಳನ್ನು ಕಲೆಹಾಕಿ, ಹೆಚ್ಚು ಆತ್ಮವಿಶ್ವಾಸದಿಂದ ವಿದ್ಯಾರ್ಥಿಗಳು ಚರ್ಚೆ ಮಾಡಬೇಕು. ಸಮಾಜಕ್ಕೆ ಇದೇ ದಾರಿದೀಪ" ಎಂದರು.

ಇದೇ ವೇಳೆ, ಕಳೆದ ವರ್ಷದಲ್ಲಿ ಎಸ್.ಎಸ್.ಎಲ್.ಸಿಯಲ್ಲಿ ಅತಿ ಹೆಚ್ಚು 543 ಅಂಕ ಪಡೆದ ಗೌರಮ್ಮ, ಮತ್ತು ಗಣಿತದಲ್ಲಿ 88 ಅಂಕ ಪಡೆದ ಸುಮಾಗೆ ಸಂಘದ ವತಿಯಿಂದ ನೆನಪಿನ ಕಾಣಿಕೆ ಮತ್ತು ಪ್ರಥಮ ಶ್ರೇಣಿಯಲ್ಲಿ ಪಾಸಾದ ಸೌಮ್ಯ, ಅರ್ಪಿತ ರಿಗೆ ತಲಾ 5,000 ರೂ ಮೊತ್ತದ ಚೆಕ್ ಗಳನ್ನು ನೀಡಲಾಯಿತು.



ಕಾರ್ಯಕ್ರಮಕ್ಕೆ ಆಗಮಿಸಿದ್ದ ಪತ್ರಕರ್ತರಾದ ಮುಕುಂದ್, ವೀರೇಶ್, ಹೊರ ಶಾಲೆಯ ಶಿಕ್ಷಕರನೇಕರು ಎಲ್ಲರನ್ನೂ ಸಹಶಿಕ್ಷಕರಾದ ಧರ್ಮಪಾಲ್ ಸ್ವಾಗತಿಸಿದರೆ, ದೈಹಿಕ ಶಿಕ್ಷಕ ಮಹೇಶ್ ಸಮಯಪಾಲಿಸಿದರು. ಸಹಶಿಕ್ಷಕ ಉಮೇಶ್ ವಿದ್ಯಾರ್ಥಿಗಳನ್ನು ಸಂಭಾಳಿಸಿದರು. ಹೆಚ್.ಎ.ಮಹದೇವಯ್ಯ ಎಲ್ಲರನ್ನು ವಂದಿಸಿದರು. ಇಡೀ ಕಾರ್ಯಕ್ರಮವನ್ನು ಉಪನ್ಯಾಸಕರು ಮತ್ತು ಹಳೇ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಚಿಕ್ಕವೀರಶೆಟ್ಟರು ಅಚ್ಚುಕಟ್ಟಾಗಿ ನಿರೂಪಿಸಿದರು.

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು