ಗಣರಾಜ್ಯೋತ್ಸವ-2012

ಗಣರಾಜ್ಯೋತ್ಸವ. ನಮ್ಮ ಉತ್ಸವ. ಪ್ರತಿ ಭಾರತೀಯನ ಉತ್ಸವ. ಎಂದಿನಂತೆ ನಮ್ ಇಸ್ಕೂಲ್ ನಲ್ಲೂ ಜನವರಿ 26 2012ರ ಸೂರ್ಯೋದಯ ಗಣರಾಜ್ಯೋತ್ಸವವನ್ನು ಹೊತ್ತು ತಂತು. ಬಹಳ ಬೇಗ ಕಾಲೇಜ್ ಮತ್ತು ನಮ್ಮ ಸ್ಕೂಲ್ ಶಿಕ್ಷಕರ ಸಮೂಹ ಸೇರಿತ್ತು. ತ್ರಿವರ್ಣ ಧ್ವಜ - ತನ್ನ ಮೌಲ್ಯಗಳನ್ನು, ಸಂದೇಶಗಳನ್ನು, ಆದರ್ಶಗಳನ್ನು, ಭಾವ್ಯಕ್ಯತೆಯನ್ನು ಮಕ್ಕಳೆದೆಗೂಡಲ್ಲಿ ಬಿತ್ತಲು ತನ್ನೊಳಗೆ ಪುಷ್ಪಪಕಳೆಗಳನ್ನು ಹೊತ್ತು ನಿಂತಿತ್ತು.
ಬಾವುಟ ಬಿತ್ತುವ ಭಾವ್ಯಕ್ಯತೆಯ ಬಿತ್ತನೆಯನ್ನು ಬಿಚ್ಚುವ ಕೆಲಸ ಈ ಬಾರಿ ಉಪಪ್ರಾಂಶುಪಾಲರಾದ ಪ್ರಶಾಂತ್.ಎಂ.ಸಿ ಅವರದ್ದಾಗಿತ್ತು. ಬಾವುಟ ರೆಕ್ಕೆ ಬಿಚ್ಚಿತು. ಅದಾಗಲೇ ಅನುರಣಿಸುತ್ತಿತ್ತು "ಜನಗಣಮನ..." ಬಳಿಕ ಝಂಡಾ ಊಂಚಾ...ವನ್ನು ಮಕ್ಕಳು ಮನದುಂಬಿ ಹಾಡಿದರು. ಆ ನಂತರ ಸಂಪ್ರದಾಯದ ವೇದಿಕೆ ಕಾರ್ಯಕ್ರಮ. ಈ ಬಾರಿ ನಮ್ ಕಾಲೇಜಿನ ಕನ್ನಡ ಉಪನ್ಯಾಸಕ ರಾಜೀವ್ ಅವರು ಈ ಜವಬ್ದಾರಿ ಹೊತ್ತಿದ್ದರು. ಜವಬ್ದಾರಿಯುತವಾಗಿಯೇ ಪ್ರಸ್ತುತ ಸಂಗತಗಳ ನಿದರ್ಶನದ ಸಮೇತ ಮಕ್ಕಳ ಮುಂದಿಟ್ಟರು.
ಉಪನ್ಯಾಸ    
"ಒಬ್ಬ ಅಣ್ಣಹಜಾರೆ ಈ ದೇಶವನ್ನು ಒಗ್ಗೂಡಿಸಿದರು. ಭ್ರಷ್ಟಾಚಾರದ ಬ್ರಹ್ಮಾಂಡ ಮುಖವನ್ನು ತೆರೆದಿಟ್ಟರು. ಅವರಿಗೆ ನಾವು ನೀವೆಲ್ಲ ಕೇವಲ ಬರಿ ಮಾತಲ್ಲಿ ಕೈ ಜೋಡಿಸಿದೆವು. ಆದರೆ, ಅದು ನಮ್ಮ ಅಂತರಂಗದಲ್ಲಿ ಜಾಗೃತವಾಗಬೇಕು. ಭ್ರಷ್ಟರಿಗೆ ನಮ್ಮ ನೆರೆಹೊರೆಯಲ್ಲೇ ಕಡಿವಾಣ ಹಾಕುವ ಮೂಲಕ ಈ ದೇಶವನ್ನು ಅದರಿಂದ ವಿಮುಕ್ತ ಮಾಡಬೇಕು" ಎಂದರು.



ಬಳಿಕ ಔಪಚಾರಿಕವಾಗಿ ಮಾತನಾಡಿದ್ದು ಉಪಪ್ರಾಂಶುಪಾಲರು. ಮಾತಿನಲ್ಲಿ ಕೇಳಿದ್ದು ಇಷ್ಟು :  " ಕೇವಲ ಗಣರಾಜ್ಯೋತ್ಸವ ಎಂದರೆ ರಜೆ. ರಜೆಯ ಸಂಜೆ ಮುಂಜಾನೆ ನಡೆದ ದೆಹಲಿ ಪರೇಡ್ ನ ವಿಹಂಗಮ ನೋಟವನ್ನು ಮನೆಯ ಆರಾಮ್ ಕುರ್ಚಿಯಲ್ಲಿ ಕುಳಿತು ಕಣ್ತುಂಬಿಕೊಳ್ಳುವುದಲ್ಲ. ಕುರ್ಚಿಗಾಗಿ ಹೋರಾಡುವವರ ವ್ಯಥೆಗೆ ಕಾರಣ ಏನು ? ಕುಳ್ಳಲು ಕುರ್ಚಿ ಇರದ ಜನರ ಕಥೆ ಏನು ? ದೇಶಪ್ರೇಮ ಸಾರುವ ದಿನಗಳಲ್ಲೂ ದೇಶದ್ರೋಹಿಗಳ ಭಯ ಏತಕೆ ? ಸಾಮಾಜಿಕ ವ್ಯವಸ್ಥೆಯ ಅಣು ಅಣುಗಳಲ್ಲೂ ಭ್ರಷ್ಟಾಚಾರದ ಬ್ರಹ್ಮರಾಕ್ಷಸ ಆವಿರ್ಭವಿಸುವುದಕ್ಕೆ ನಮ್ಮ ಶಿಕ್ಷಿತರ ಔದಾಸೀನ್ಯತೆ ಕಾರಣವಲ್ಲವೇ ? ವಿದ್ಯಾವಂತರ ನಿಷ್ಕ್ರೀಯತೆ ಕಾರಣವಲ್ಲವೇ ? ಹೊರದೇಶಗಳಿಗೆ ಹೋಲಿಸಿದರೆ ಇನ್ನೂ ಬಾಲ್ಯಾವಸ್ಥೆಯಲ್ಲಿರುವ ಪ್ರಜಾಪ್ರಭುತ್ವವನ್ನು ಯೌವನಾವಸ್ಥೆಗೆ ಕರೆದೊಯ್ಯುವುದು ಯಾವಾಗ ? ಸಂವಿಧಾನದ ಹುಟ್ಟಿದ ದಿನವಾದ ಇಂದು ಸಂವಿಧಾನ ಏನು ? ಏಕೆ ? ಹೇಗೆ ? ಎಂಬಿತ್ಯಾದಿ ಮಹತ್ವದ ಸಂಗತಿಗಳು ಕೇವಲ ರಾಜ್ಯಶಾಸ್ತ್ರ ಓದುವ ಅಧ್ಯಾಪಕರಿಗಷ್ಟೇ ಏಕೆ ? ಉಳಿದವರಿಗೆ ಏಕಿಲ್ಲ ?......ಹೀಗೆ ಪ್ರಶ್ನೆಗಳನ್ನ ಮುಂದಿಟ್ಟು ತಮ್ಮ ಅಂತರಂಗವನ್ನು ಮುಂದಿಟ್ಟರು.ಬರುವ ದಿನಗಳಲ್ಲಿ ಗಣರಾಜ್ಯದ ದಿನವನ್ನು ಸಾರ್ಥಕಪಡಿಸಿಕೊಳ್ಳುವಂತಹ ಕಾರ್ಯಕ್ರಮಗಳನ್ನು ಸಂಘಟಿಸುವುದಾಗಿ ಹೇಳಿದರು. 

ಕಾರ್ಯಕ್ರಮದಲ್ಲಿ ಕಾಲೇಜು ಉಪನ್ಯಾಸಕ ವೃಂದ, ನಮ್ ಸ್ಕೂಲ್ ಶಿಕ್ಷಕ ಸಮೂಹ ಆಸ್ಥೆಯಿಂದ ಹಾಜರಿತ್ತು ?. ಎಂದಿನಂತೆ ಮೇರ್ವಾಡೆ ಮಕ್ಕಳು ಸಂಗೀತ ಗಂಗೆ ಹರಿಸಿದರು. ಹಾಡು ಹಬ್ಬದೊಂದಿಗೆ ರಾಷ್ಟ್ರೀಯ ಹಬ್ಬ ಮುಗಿಯಿತು. ಮಾರನೆ ದಿನವೇ ಸ್ಕೂಲ್ ಡೇ ಇತ್ತು. ಎಲ್ಲರಿಗೂ ಮತ್ತೊಮ್ಮೆ ಶುಭಾಶಯಗಳನ್ನು ಕೋರಿ ಕಾರ್ಯಕ್ರಮಕ್ಕೆ ಫುಲ್ ಸ್ಟಾಪ್ ಇಟ್ಟೆವು.

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು